ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆನ್ನುವವರು ನನ್ನ ಈ ಕೆಳಗಿನ ಕೆಲ ಪ್ರಶ್ನೆಗಳಿಗೆ ಉತ್ತರಿಸಿ.
೧) ಕನ್ನಡದ ಶೇ. ೫೦ ಕ್ಕೂ ಹೆಚ್ಚು ಪದಗಳು ಸಂಸ್ಕೃತದ್ದಾಗಿದೆ. ಕನ್ನಡಿಗರು ತಾವು ಇರಿಸಿಕೊಳ್ಳೊ ಬಹುತೇಕ ಹೆಸರುಗಳು ಸಂಸ್ಕೃತದ್ದಾಗಿರುತ್ತದೆ. ತಮಿಳಿನಲ್ಲಿ ತಾವರೆಕಣ್ಣೋಳೇ ಎಂಬ ಅರ್ಥ ಬರುವ ತಮಿಳು ಹೆಸರನ್ನೇ ಇಟ್ಟುಕೊಳ್ಳುತ್ತಾರೆ. ಆದರೆ ನಾವುಗಳು ಕಮಲಾಕ್ಷಿ ಎಂದೇ ಹೆಸರಿಟ್ಟುಕೊಳ್ಳುತ್ತೇವೆ. ನಾವು ಕೂಡ ಕಮಲದಂತ ಕಣ್ಣುಳ್ಳವಳೇ ಎಂದು ಇಟ್ಟುಕೊಳ್ಳಬಹುದೇ?
೨) ಕರ್ನಾಟಕದ ಮುಸ್ಲೀಮರು ಉರ್ದು ಮತ್ತು ಅರಬ್ಬಿ ಭಾಷೆಯನ್ನೇ ಉಪಯೋಗಿಸುತ್ತಾರೆ. ಈ ಭಾಷೆಗಳು ಭಾರತದ್ದೇ? ಇದರ ಬಗ್ಗೆ ಚಕಾರವೆತ್ತಲು ಸಂಸ್ಕೃತ ವಿರೋಧಿಗಳು ಯಾಕೆ ಯತ್ನಿಸಲಿಲ್ಲ? ಉರ್ದು ಅಕಾಡೆಮಿ ಇದೆ. ಮದರಸಾಗಳ ಮೂಲಕ ಅರಬ್ಬಿ ಭಾಷೆಯನ್ನು ಹರಡುತ್ತಿದ್ದಾರೆ. ಕರ್ನಾಟಕದ ಮುಸಲ್ಮಾನರು ಉರ್ದು ಮತ್ತು ಅರಬ್ಬಿ ಭಾಷೆಯನ್ನು ತಮ್ಮ ಅಧಿಕೃತ ಭಾಷೆಯನ್ನಾಗಿಸಿಕೊಂಡಿದ್ದಾರೆ. ಅದೇ ರೀತಿ ಕ್ರೈಸ್ತರು ಕೊಂಕಣಿಯನ್ನು ತಮ್ಮ ಮಾತೃಭಾಷೆಯನ್ನಾಗಿಸಿಕೊಂಡಿದ್ದಾರೆ. ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಅಲ್ಲಿನ ಮುಸಲ್ಮಾನರು, ಕ್ರೈಸ್ತರು ತಮಿಳು, ಮಲೆಯಾಳಿಯನ್ನೇ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಅವರುಗಳಿಗೆ ಕನ್ನಡ ಅಸಡ್ಡೆ. ರಾಜ್ಯ ಸರ್ಕಾರದಿಂದಲೇ ಇವುಗಳ ಅಭಿವೃದ್ಧಿಗೆ ಒಂದೊಂದು ಅಕಾಡೆಮಿ ಮಾಡಿದಾಗ ಈ ಸ್ವಯಂಘೋಷಿತ ಬುದ್ಧಿಜೀವಿಗಳು ಏನು ಮಾಡುತ್ತಿದ್ದರು? ಆಗ ವಿರೋಧಿಸಬೇಕು ಎಂಬ ಭಾವನೆ ಇವರಿಗೆ ಬರಲಿಲ್ಲವೇ?
೩) ಸಂಸ್ಕೃತ ವಿಶ್ವವಿದ್ಯಾಲಯದಿಂದ ಕನ್ನಡಕ್ಕೆ ದ್ರೋಹ, ತೊಂದರೆ ಆಗುತ್ತೆ ಎನ್ನುವಿರಾ! ಹಾಗಾದರೆ ಕನ್ನಡ ವಿಶ್ವವಿದ್ಯಾಲಯವೂ ಇದೆಯಲ್ಲ, ಅದರಿಂದ ಕನ್ನಡಕ್ಕಾದ ಉಪಯೋಗವಾದರೂ ಏನು?
೪) ಇಷ್ಟಕ್ಕೂ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸಿದ ಕೂಡಲೇ ಕನ್ನಡಿಗರೆಲ್ಲರೂ, ಕನ್ನಡವನ್ನು ಮರೆತು, ಸಂಸ್ಕೃತವನ್ನು ಕಲಿಯು ಅದನ್ನೇ ಉಪಯೋಗಿಸುತ್ತಾರೆ ಎನ್ನುವಿರಾ ಮಾನ್ಯ ವಿರೋಧಿಗಳೇ?
ಸಂಸ್ಕೃತ ಭಾಷೆಯು ಜಗತ್ತಿನ ಪುರಾತನವಾದ ಮತ್ತು ಎಲ್ಲಾ ಭಾರತೀಯ ಭಾಷೆಗಳಿಗೆ ಮಾತೃ ಸ್ಥಾನದಲ್ಲಿರುವ ಭಾಷೆಯಾಗಿದೆ. ಅದು ದೇವಭಾಷೆ. ಈ ಭಾಷೆಯಲ್ಲಿಯೇ ರಚಿತವಾದದ್ದು ವೇದಗಳು, ಉಪನಿಷತ್ತುಗಳು, ಮಹಾ ಕಾವ್ಯಗಳು. ಸಂಸ್ಕೃತವೆಂದರೆ ’ಸಂಸ್ಕೃತಿಯ ಪ್ರತೀಕ’ ಇದನ್ನು ಅರಿಯದೇ ನಾವುಗಳು ಆಂಗ್ಲಭಾಷೆಯ ಹಿಂದೆ ಬಿದ್ದಿದ್ದೇವೆ. ಕೆಲ ದಿನಗಳ ಹಿಂದೆ ಕನ್ನಡಪ್ರಭದಲ್ಲಿ ಒಬ್ಬ ಮಹಿಳಾ ಲೇಖಕಿಯು ’london bridge is falling down, falling down ಎಂಬ ಕವನದ ಬಗ್ಗೆ ಬರೆದಿದ್ದರು. ಲಂಡನ್ ಸೇತುವೆ ಬಿದ್ದ ಬಗ್ಗೆ ಅದನ್ನು ಪುನರ್ ನಿರ್ಮಾಣ ಮಾಡುವ ಬಗ್ಗೆ ಇರುವ ಕವನವನ್ನು ನಮ್ಮಲ್ಲಿ ಏಕೆ ಕಲಿಸಬೇಕು. ಎನ್ನುವುದು ಅವರ ಅಭಿಪ್ರಾಯವಾಗಿದೆ. ಅವರ ಅಭಿಪ್ರಾಯ ಸರಿ. ಇದನ್ನು ನಮ್ಮ ಮಕ್ಕಳು ಕಲಿಯಬೇಕೆ. ಇನ್ನೊಂದು ಪದ್ಯ ಗಮನಿಸಿ. Soloman Grundy Born on a Monday, Christened on Tuesday, Married on Wednesday, Took ill on Thrusday, Worse on Friday, Died on Saturday Burried on Sunday, This is the end of Solumn Grundy. ಈ ಕವನದಲ್ಲಿ ಕವಿತ್ವ ಎಲ್ಲಿದೆ. ಇದನ್ನು ನಮ್ಮ ಮಕ್ಕಳು ಕಲಿಯುತ್ತಿಲ್ಲವೇ?
ಮೊಘಲರ ಕಾಲದಲ್ಲಿ ಅರಬ್ಬಿಯನ್ನು ಬಲವಂತವಾಗಿ ನಮ್ಮಲ್ಲಿ ತುರುಕಲಾಯಿತು. ಸ್ವಾತಂತ್ರ್ಯ ನಂತರ ರಾಜಕೀಯ ಕುತಂತ್ರದಿಂದ ಹಿಂದಿ ಬೆಳೆಯಿತು. ಹಿಂದಿಗೆ ಈಗಲೂ ದೇವನಾಗರಿ ಲಿಪಿಯೇ ಆಧಾರವಾಗಿದೆ.
ಸಂಸ್ಕೃತವು ಆದಿ ಭಾಷೆ. ಇದರಲ್ಲಿ ರಚಿತವಾದ ಶ್ರೇಷ್ಠ ಕೃತಿಗಳನ್ನು ಓದಬೇಕಾಗಿದೆ. ಪಾ.ವೆಂ. ಆಚಾರ್ಯರು ರವೀಂದ್ರನಾಠ ಟಾಗೋರರ ಗೀತಾಂಜಲಿಯನ್ನು ಅದರ ಮೂಲ ಭಾಷೆಯಲ್ಲಿಯೇ ಓದಲು ತಮ್ಮ ಇಳಿ ವಯಸ್ಸಿನಲ್ಲಿ ಬಂಗಾಳಿ ಕಲಿತರು. ಅದರಿಂದ ಅವರ ಕನ್ನಡತನಕ್ಕೆ ಅನ್ಯಾಯವಾಯಿತೇ? ಕನ್ನಡದ ಶ್ರೇಷ್ಠ ಲೇಖಕರಾದ ಡಿ.ವಿ.ಜಿ. ಗೊರೂರು ಅಯ್ಯಂಗಾರ್, ಮಾಸ್ತಿ, ರಾಜರತ್ನಂ ಮುಂತಾದವರ ಮಾತೃಭಾಷೆ ಬೇರೆಯೇ ಇದ್ದರೂ ಕನ್ನಡಲ್ಲಿ ಬರೆದು, ಕನ್ನಡತನ ಮೆರೆದು ಕನ್ನಡಕ್ಕೆ ಕೀರ್ತಿ ತಂದಿದ್ದಾರೆ.
ಅದೇ ರೀತಿ ಸಂಸ್ಕೃತದ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಬರಬೇಕಾಗಿದೆ. ಅದಕ್ಕಾಗಿ ಸಂಸ್ಕೃತ ಅಧ್ಯಯನ ಅಗತ್ಯವಾಗಿದೆ. ಭಾರತದಲ್ಲಿ ಜ್ಞಾನಿಗಳನ್ನಾಗಿಸಿದ್ದು, ಇದೇ ಸಂಸ್ಕೃತವೇ. ಇದನ್ನು ಸತ್ತ ಭಾಷೆಯನ್ನಾಗಿಸದೇ, ಸತ್ವ ಭಾಷೆಯನ್ನಾಗಿಸಬೇಕು. ಎಲ್ಲಿಂದಲೋ ಬಂದ ಇಂಗ್ಲೀಷ್, ಅರಬ್ಬಿ, ಉರ್ದು ಭಾಷೆಯನ್ನು ಬೆಳೆಸುವ ಬದಲು ಎಲ್ಲಕ್ಕೂ ಉತ್ತಮವಾದ ಕಂಪ್ಯೂಟರ್ ಗೆ ಹೊಂದಿಕೊಳ್ಳುವಂತ ಭಾಷೆ ಎಂದು ಪ್ರಖ್ಯಾತವಾದ, ನಮ್ಮದೇ ಪೂರ್ವಿಕರ ಭಾಷೆ ಸಂಸ್ಕೃತವನ್ನು ಅಭ್ಯಾಸಿಸಲೇಬೇಕು. ಕೇಂದ್ರ ಸರ್ಕಾರವು ಸಹ ಸಂಸ್ಕೃತದ ಅಭಿವೃದ್ಧಿಗಾಗಿ ಪ್ರತಿವರ್ಷವೂ ಕೋಟ್ಯಾಂತರ ರೂ. ಗಳನ್ನು ವ್ಯಯಿಸುತ್ತಿದೆ.
ಅದೇ ರೀತಿ ಕರ್ನಾಟಕದಲ್ಲಿಯೂ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಒಳ್ಳೆ ಕೆಲಸ ಮಾಡಲು ಕೆಲವರ ಅಡಚಣೆ, ಕಾಲೆಳಿಯುವಿಕೆ ಸಾಮಾನ್ಯ. ಅದನ್ನು ಕಡೆಗಣಿಸಿ, ವಿಶ್ವವಿದ್ಯಾಲಯದ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು.
ರಮೇಶ್ ಭಾರದ್ವಾಜ್,
ಪಯಣ 5
11 years ago